top of page

ನಿಮ್ಮ ಮನಸ್ಸು ಸಂತೋಷವಾಗಿರಲು, ಆರೋಗ್ಯವಾಗಿರಲು ನೀವೂ ಸ್ವಲ್ಪ ಮನಸ್ಸು ಮಾಡಿ

ನಿಮ್ಮ ಮನಸ್ಸು ಸಂತೋಷವಾಗಿರಲು, ಆರೋಗ್ಯವಾಗಿರಲು ನೀವೂ ಸ್ವಲ್ಪ ಮನಸ್ಸು ಮಾಡಿ

"ಆರೋಗ್ಯ" ಎಂಬ ಪದದ ವಿಶಾಲ ಅರ್ಥದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಒಳಗೊಂಡಿದೆ. ಈ ವಿಶಾಲ ಪರಿಕಲ್ಪನೆಯನ್ನು ಹಲವಾರು ಆರೋಗ್ಯ ಕಾರ್ಯಕರ್ತರು ಒಪ್ಪುವರೇ ಆದರೂ, ಎಲ್ಲರ ಗಮನ ಸಾಮಾನ್ಯವಾಗಿ ದೈಹಿಕ ಆರೋಗ್ಯದಕಡೆಗೆ ಹೆಚ್ಚು ಒತ್ತು ಕೊಡುತ್ತಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೇ, ಸಾಕಷ್ಟು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವಿಲ್ಲದೇ ಇರುವುದು ಮತ್ತು ಇಂತಹ ಸಮಸ್ಯೆಗಳನ್ನು ತಿಳಿದುಕೊಳ್ಳುವುದು, ರೋಗನಿರ್ಣಯ ಮಾಡುವುದು ಅವರಿಗೆ ಕಡಿಮೆ ಆರಾಮದಾಯಕವಾಗಿದೆ. ಆದರೇ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ, ಹಾಗೂ ಅದರ ಹತ್ತು ಹಲವಾರು ಆಯಾಮಗಳ ಬಗ್ಗೆ ಅರಿವು ಬೆಳೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಮಾನಸಿಕ ಖಾಯಿಲೆಗಳ ಬಗ್ಗೆ ತಿಳಿದುಕೊಳ್ಳಲು, ಅದನ್ನು ಸಮರ್ಥವಾಗಿ ನಿಭಾಯಿಸಲು ಹೆಚ್ಚು ಒಲವು ಮತ್ತು ಆಸಕ್ತಿಯನ್ನು ತೋರುತ್ತಿದ್ದಾರೆ.


ಮಾನಸಿಕ ಅಸ್ವಸ್ಥತೆಯ ಬಗ್ಗೆ ನೀವೇಕೆ ಜಾಗರೂಕರಾಗಿರಬೇಕು, ಕಾಳಜಿವಹಿಸಬೇಕು?


1. ಯಾಕೆಂದರೆ ಅದು ನಮೆಲ್ಲರ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಐದು ಜನರಲ್ಲಿ ಒಬ್ಬರು ತಮ್ಮ ಜೀವಿತಾವದಿಯಲ್ಲಿ ಮಾನಸಿಕ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಮಾನಸಿಕ ಸಮಸ್ಯೆ ಎನ್ನುವುದು ಎಷ್ಟು ಸರ್ವೇಸಾಮಾನ್ಯ ವಾಗಿಬಿಟ್ಟಿದೆ ಎಂದು ನೀವೇ ಆಲೋಚಿಸಿ. ಯಾರಾದರೂ ಮಾನಸಿಕ ಅಸ್ವಸ್ಥತೆಗೆ ತುತ್ತಾಗಬಹುದು. ಇದಕ್ಕೆ ವಯಸ್ಸು, ಲಿಂಗ, ಜಾತಿ, ಧರ್ಮ, ಕಾಲಗಳೆಂಬ ನಿರ್ಬಂಧನೆಗಳಿಲ್ಲ.


2. ಯಾಕೆಂದರೆ ಅದು ಸಾಮಾಜಿಕ ಆರೋಗ್ಯದ ಹೊರೆಯಾಗಿ ನಿಂತಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಇದರ ಬಗ್ಗೆ ಮುಂದುವರೆದ ಸಂಶೋದನೆ ಮಾಡಿದಾಗ ತಿಳಿದ ಸಂಗತಿಯೆಂದರೆ, ಶೇಕಡಾ 40% ರಷ್ಟು ಜನ ಸಾಮಾನ್ಯ ಆರೋಗ್ಯ ಸೇವೆಗೆ ಚಿಕಿತ್ಸೆ ಪಡೆಯಲು ಹಾಜರಾಗುವವರು ಒಂದಲ್ಲಾ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುವವರೇ ಆಗಿದ್ದಾರೆ. ಸಾಮಾನ್ಯವಾಗಿ ಜನರು ತಮ್ಮ ಅಸ್ಪಷ್ಟ ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಬಂದಿರುತ್ತಾರೆ, ಅದು "ಸೈಕೋಸೊಮ್ಯಾಟಿಕ್" ಅಥವಾ ಸಮಾನ ರೂಪದ ಖಾಯಿಲೆಗಳೇ ಆಗಿರುತ್ತವೆ. ಆದರೆ ಅವರೆಲ್ಲರೂ ವಾಸ್ತವವಾಗಿ ಮಾನಸಿಕ ಅಸ್ವಸ್ಥತೆಯಿಂದಲೇ ಬಳಲುತ್ತಿರುತ್ತಾರೆ.


3. ಯಾಕೆಂದರೆ ಅದುನಮ್ಮನ್ನು ಬಹಳ ನಿಷ್ಕ್ರಿಯಗೊಳಿಸುತ್ತದೆ. ನಮ್ಮ ಜನರಲ್ಲಿ ಸಾಮಾನ್ಯ ಗ್ರಹಿಕೆ ಏನೆಂದರೆ, ಮಾನಸಿಕ ಅಸ್ವಸ್ಥತೆ, ದೈಹಿಕ ಅಸ್ವಸ್ಥತೆಗಿಂತ ಕಡಿಮೆ ಗಂಭೀರವೆಂಬ ಜನಪ್ರಿಯ ನಂಬಿಕೆ ಬಹಳಷ್ಟಿದೆ. ಆದರೆ ವಾಸ್ತವವಾಗಿ ಮಾನಸಿಕ ಅಸ್ವಸ್ಥತೆ ನಮಗೇ ಗೊತ್ತಿಲ್ಲದಂತೆ ತೀವ್ರ ಅಂಗವೈಕಲ್ಯವನ್ನು ಉಂಟುಮಾಡಬಹುದು. ಆತ್ಮಹತ್ಯೆ ಮತ್ತು ಅಪಘಾತಗಳ ಫಲಿತಾಂಶವಾಗಿ ಸಾವಿಗೂ ಕಾರಣವಾಗಬಹುದು. ಕೆಲವರು ಮಾನಸಿಕ ಮತ್ತು ದೈಹಿಕ ಎರಡೂ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾರೆ, ಅಂತಹವರಲ್ಲಿ ಮಾನಸಿಕ ಅಸ್ವಸ್ಥತೆಯು ತಮಗಾಗಲೇ ಕಾಡುತ್ತಿರುವ ದೈಹಿಕ ಖಾಯಿಲೆಗಳನ್ನು ಮತ್ತಷ್ಟು ಹಾಳುಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯು 2001 ರಲ್ಲೇ ಪ್ರಕಟಿಸಿದ ಒಂದು ವರದಿಯ ಪ್ರಕಾರ 10 ರಲ್ಲಿ 4 ಜನ ನಿಷ್ಕ್ರಿಯಗೊಳ್ಳುವ ಪರಿಸ್ಥಿತಿಗಳನ್ನು ಎದುರಿಸುತ್ತಾರೆ, ಅದು ಕೇವಲ ಮಾನಸಿಕ ಅಸ್ವಸ್ಥತೆಯಿಂದಲೇ ಆಗಿದೆ. ಇದರಲ್ಲಿ "ಖಿನ್ನತೆ" ಹೆಚ್ಚು ನಿಷ್ಕ್ರಿಯಗೊಳಿಸುವ ಪರಿಸ್ಥಿತಿಯಾಗಿದೆ, ಅದರಲ್ಲೂ ಸಾಮಾನ್ಯವಾಗಿ ಕಾಡುವ, ಕಾಣಿಸಿಕೊಳ್ಳುವ "ರಕ್ತಹೀನತೆ", "ಮಲೇರಿಯಾ", ಇತರೆ ಖಾಯಿಲೆಗಳನ್ನು ಕೂಡ ಹಿಂದಿಕ್ಕಿ, ಬಹಳ ವೇಗವಾಗಿ ಸಾಗುತ್ತಿದೆ.


4. ಯಾಕೆಂದರೆ ಮಾನಸಿಕ ಆರೋಗ್ಯದ ಸೇವೆಗಳು, ಚಿಕಿತ್ಸೆಗಳು ಬಹಳ ಅಸಮರ್ಪಕವಾಗಿದೆ. ಮೊಟ್ಟ ಮೊದಲನೆಯದಾಗಿ ಭಾರತವೂ ಒಳಗೊಂಡಂತೆ ಹಲವಾರು ದೇಶಗಳಲ್ಲಿ ಮನೋವೈದ್ಯರ, ಮನಶಾಸ್ತ್ರಜ್ಞರ, ಮಾನಸಿಕ ಆರೋಗ್ಯ ಕಾರ್ಯಕರ್ತರ ತೀವ್ರ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಇವರೆಲ್ಲರೂ ತಮ್ಮ ಬಹುಬಾಗದ ಸಮಯವನ್ನು ತೀವ್ರ ಮಾನಸಿಕ ಅಸ್ವಸ್ಥತೆಯಿಂದ (ಸೈಕೋಸಸ್) ಬಳಲುತ್ತಿರುವವರನ್ನೇ ಆರೈಕೆ ಮಾಡುವುದರಲ್ಲಿ, ಚಿಕಿತ್ಸೆಯನ್ನು ಕೊಡುವುದರಲ್ಲಿ ತೊಡಗಿರುತ್ತಾರೆ. ಸಾಮಾನ್ಯ ಮಾನಸಿಕ ಸಮಸ್ಯೆಗಳಾದಂತ ಖಿನ್ನತೆ, ಮಧ್ಯಪಾನ, ಧೂಮಪಾನದ ಚಟಗಳು, ಇವೆಲ್ಲವನ್ನೂ ಗುರುತಿಸಿಕೊಳ್ಳುವುದೇ ಕಡಿಮೆ, ಗುರುತಿಸಿಕೊಂಡರೂ ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆಪಡೆಯಬೇಕು ಎಂದು ಆಲೋಚಿಸುವುದೂ ಕೂಡ ವಿರಳ, ಮತ್ತು ಒಂದು ಪಕ್ಷ ಆಲೋಚಿಸಿದರೂ ಅದನ್ನು ಮಾನಸಿಕ ಆರೋಗ್ಯ ಕಾರ್ಯಕರ್ತರಲ್ಲಿ, ಮನಶಾಸ್ತ್ರಜ್ಞರಲ್ಲಿ ತೋರಿಸಿ ಚಿಕಿತ್ಸೆಪಡೆಯಬೇಕು ಎಂದು ಎಷ್ಟು ಜನಕ್ಕೆ ತಿಳಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ಮನೆಯ ಪಕ್ಕದಲ್ಲಿರುವ ಸಾಮಾನ್ಯ ಆರೋಗ್ಯ ವೈದ್ಯರೇ (ಜನರಲ್ ಹೆಲ್ತ್ ಪ್ರ್ಯಾಕ್ಟಿಶನರ್) ಮಾನಸಿಕ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆಯನ್ನೂ ಕೂಡ ಕೊಡುತ್ತಿದ್ದಾರೆ. ಆದರೇ, ಅದು ಎಷ್ಟರಮಟ್ಟಿಗೆ ಫಲಕಾರಿಯಾಗುತ್ತಿದೆಯೋ ತಿಳಿಯದು. ಇನ್ನುಮುಂದಾದರೂ ವೃತ್ತಿಪರ ಮಾನಸಿಕ ತಜ್ಞ ವೈದ್ಯರನ್ನು ಒಂದು ಬಾರಿ ಬೇಟಿ ಮಾಡಿ.


5. ಯಾಕೆಂದರೆ ನಮ್ಮ ಸಮಾಜಗಳು ಬಹಳ ವೇಗವಾಗಿ ಬದಲಾಗುತ್ತಿವೆ. ಇಡೀ ವಿಶ್ವದಲ್ಲಿ ಬಹಳಷ್ಟು ಸಮಾಜಗಳು, ದೇಶಗಳು, ತೀವ್ರತರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು, ಬದಲಾವಣೆಗಳನ್ನು ಎದುರಿಸುತ್ತಿವೆ. ಕ್ಷಿಪ್ರ ಅಭಿವೃದ್ಧಿ ಮತ್ತು ಬೆಳವಣಿಗೆ, ವಿಸ್ತಾರಗೊಳ್ಳುತ್ತಿರುವ ಆದಾಯ ಅಸಮಾನತೆ, ಏರುತ್ತಿರುವ ನಿರುದ್ಯೋಗ ಮತ್ತು ಹಿಂಸೆಯ ಮಟ್ಟಗಳು ಇವೆಲ್ಲವೂ ಪ್ರಸ್ತುತ ನಮ್ಮ ಸಮಾಜ ಮತ್ತು ಸಮುದಾಯಗಳು ಬದಲಾಗುತ್ತಿರುವುದಕ್ಕೆ ಅತಿ ಮುಖ್ಯ ಕಾರಣಗಳು. ಇವೆಲ್ಲಾ ಅಂಶಗಳು ಒಂದು ರೀತಿ ಇವತ್ತಿನ ಪ್ರಸ್ತುತ "ಅಷ್ಟು ಉತ್ತಮವಲ್ಲದ ಮಾನಸಿಕ ಆರೋಗ್ಯದ ಪರಿಸ್ಥಿತಿಗೆ, ಸಮಾಜಕ್ಕೆ ಕಾರಣವೆಂಬಂತಿದೆ.”


6. ಯಾಕೆಂದರೆ ಮಾನಸಿಕ ಅಸ್ವಸ್ಥತೆ ಒಂದು ಕಳಂಕವಾಗಿ ಬಿಟ್ಟಿದೆ. ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಅದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಇಂತಹ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಇಡೀ ಸಮಾಜದಲ್ಲಾಗಲಿ, ಕುಟುಂಬದಲ್ಲಾಗಲಿ ತಾರತಮ್ಯದಿಂದ ನೋಡುತ್ತಿರುತ್ತಾರೆ ಹಾಗೂ ಅಂತಹವರೊಟ್ಟಿಗೆ ಅಂತರವನ್ನು ಕೂಡ ಕಾಪಾಡಿಕೊಳ್ಳುತ್ತಾರೆ. ಇಂತಹವರಿಗೆ ನಮ್ಮ ಸಾಮಾನ್ಯ ಆರೋಗ್ಯ ಕಾರ್ಯಕರ್ತರಿಂದ "ಸಹಾನುಭೂತಿಯ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ."


7. ಯಾಕೆಂದರೆ ಮಾನಸಿಕ ಅಸ್ವಸ್ಥತೆಯನ್ನು ಸರಳ, ತುಲನಾತ್ಮಕವಾಗಿ ಅಗ್ಗವಾದ ವಿಧಾನಗಳಿಂದ ಗುಣಪಡಿಸಬಹುದಾಗಿದೆ. ಕೆಲವೊಂದು ಮಾನಸಿಕ ಖಾಯಿಲೆಗಳನ್ನು ಗುಣಪಡಿಸುವುದಕ್ಕಾಗುವುದಿಲ್ಲ ಅದು ಸತ್ಯ. ಅದೇ ರೀತಿ ಹಲವಾರು ದೈಹಿಕ ಸಮಸ್ಯೆಗಳಂತ, ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ ಇಂತಹ ಹತ್ತು ಹಲವಾರು ಖಾಯಿಲೆಗಳು ಕೂಡ ಗುಣಪಡಿಸಲಿಕ್ಕಾಗುವುದಿಲ್ಲ ಅಂತ ಕೆಲವರ ವಾದ, ವೈದ್ಯರೂ ಸೇರಿ. ಆದರೇ, ಮನಸ್ಸು ಸ್ವಸ್ಥವಾಗಿದ್ದರೇ ಎಂತಹ ಖಾಯಿಲೆಯಾದರೂ ಎದುರಿಸಬಹುದು, ಗುಣಪಡಿಸಬಹುದು ಎನ್ನುವುದು ನನ್ನ ವಯಕ್ತಿಕವಾದ, ಅಚಲವಾದ ನಂಬಿಕೆ. ಇಂತಹ ಎಷ್ಟೋ ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಚಿಕಿತ್ಸೆಯಿಂದ ಜೀವನದ ಗುಣಮಟ್ಟವನ್ನು ಸುದಾರಿಸಬಹುದಾದರೇ, ಅದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೂ ಕೂಡ ಅನ್ವಹಿಸಬೇಕಲ್ಲವೆ.




ಕೊನೆಯ ಮಾತು:

ಇವತ್ತಿನ ಅತ್ಯಾದುನಿಕ ಸಂಶೋಧನೆಗಳು, ವೈದ್ಯಕೀಯ ಅವಿಷ್ಕಾರಗಳು ಎಂತಹ ಖಾಯಿಲೆಯನ್ನೇ ಆಗಲಿ ಗುಣಪಡಿಸುವ ವಿಧಾನಗಳನ್ನು ಕಂಡುಹಿಡಿಯುತ್ತಿವೆ, ಪರಿಹಾರಗಳನ್ನು ಸೋಚಿಸುತ್ತಿವೆ. ಆದರೇ, ಯಾವುದೋ ಒಂದು ಚಿಕ್ಕ ಕೆಮ್ಮು, ನೆಗಡಿ, ಜ್ವರದಂತಹ ಸಾಮಾನ್ಯ ಖಾಯಿಲೆಗಳಿಗೆ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆಯಬೇಕೆಂಬ ಅರಿವಿರುವವರು, ಮನಸ್ಸಿಗೆ ಏನೋ ನೋವು, ದುಗುಡ, ಆತಂಕ, ಭಯ, ಖಿನ್ನತೆ ಯಾದಾಗ ಯಾಕೆ ಅಷ್ಟೇ ಆಸಕ್ತಿಯಿಂದ, ಕಾಳಜಿಯಿಂದ ಸೂಕ್ತ ಸಮಯದಲ್ಲಿ ಒಬ್ಬ ಮನಶಾಸ್ತ್ರಜ್ಞರನ್ನಾಗಲಿ, ಮಾನಸಿಕ ಕಾರ್ಯಕರ್ತರನ್ನಾಗಲಿ ಏಕೆ ಮುಕ್ತವಾಗಿ ಬೇಟಿಮಾಡಿ ಸಲಹೆ, ಸೂಚನೆ ಮತ್ತು ಚಿಕಿತ್ಸೆಯನ್ನು ಪಡೆಯಲು ಹಿಂದೆ ಮುಂದೆ ನೋಡುತ್ತೀರಾ? ನಿಮ್ಮ ನೆಗಡಿ, ಕೆಮ್ಮು, ಜ್ವರ ಅಥವಾ ಇನ್ಯಾವುದೇ ದೈಹಿಕ ಸಮಸ್ಯೆಗಳಿಗೆ ಮೂಲ ಕಾರಣ ನಿಮ್ಮ ಮನಸ್ಸಿನಲ್ಲಿ ಬಹಳ ದಿನಗಳಿಂದ ಕಾಡುತ್ತಿರುವ ಯಾವುದೋ ಒಂದು ವಿಷಯ ವಿರಬಹುದು, ಭಯ, ಆತಂಕ ವಿರಬಹುದು, ಅಥವಾ ಸಮಸ್ಯೆಯನ್ನು ಹೇಗೆ ಎದುರಿಸಬೇಕೆಂಬ ಅರಿವು, ಕುಶಲತೆ ಇಲ್ಲದೆ ಇರಬಹುದು. ಇವೆಲ್ಲದರಿಂದ ಹೊರಬರಲು ವೃತ್ತಿಪರ ತಜ್ಞ ಮಾನಸಿಕ ವೈದ್ಯರು ಸಹಾಯ ಮಾಡಬಲ್ಲರು. ಆದ್ದರಿಂದ ನಿಮ್ಮ ಮನಸ್ಸಿಗೆ ಸೂಕ್ತ ಸಮಯೋಚಿತ ಚಿಕಿತ್ಸೆ ಕೊಡುವುದರಿಂದ ಎಷ್ಟೋ ಖಾಯಿಲೆಗಳು ಹೇಳಹೆಸರಿಲ್ಲದಂತೆ ಮಾಯವಾಗುತ್ತವೆ. ಇನ್ನೂ ಆಶ್ಚರ್ಯ ವೆಂದರೇ, ಕೇವಲ ಸಮಾಲೋಚನೆಯಿಂದಲೇ (ಸೈಕಾಲಜೀ ಕೌನ್ಸೆಲಿಂಗ್) ಹಲವಾರು ಮಾನಸಿಕ, ದೈಹಿಕ ಸಮಸ್ಯೆಗಳನ್ನು ಗುಣಪಡಿಸಬಹುದು, ಅದು ಕೂಡ ಶಾಶ್ವತವಾಗಿ.

Recent Posts

See All
Psychology & Mental Health

THE SUBCONSCIOUS MIND HEALS A MALIGNANCY OF THE SKIN Recently I was reading a book titled, “The Power of Your Subconscious Mind” which is...

 
 
 

Comentários


bottom of page